ಬಚ್ಚನ್, ಹರಿವಂಶರಾಯ
	1907- ಖ್ಯಾತಿವೆತ್ತ ಆಧುನಿಕ ಹಿಂದೀ ಕವಿ. ಹರಿವಂಶರಾಯ ಕಾವ್ಯನಾಮ ಹಾಗೂ ವಂಶನಾಮ. ಹುಟ್ಟಿದ್ದು ಪ್ರಯಾಗದಲ್ಲಿ. ಬಡ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ. ಕಷ್ಟ ಕಾರ್ಪಣ್ಯಗಳ ಮಧ್ಯದಲ್ಲೇ ಓದು-ಬರಹ ಮುಂದುವರೆಸಿ ಆಂಗ್ಲ ಸಾಹಿತ್ಯದಲ್ಲಿ ಪದವಿ ಪಡೆದು ಮಾಧ್ಯಮಿಕ ಶಾಲೆಯೊಂದರಲ್ಲಿ ಉಪಾಧ್ಯಾಯನಾಗಿ ಕೆಲಸ ಮಾಡುತ್ತಲೇ ಎಂ.ಎ. ಪದವಿ ಪಡೆದು ತಾವು ಓದಿದ ಪ್ರಯಾಗ್ ವಿಶ್ವವಿದ್ಯಾಲಯದಲ್ಲೆ ಅಧ್ಯಾಪಕರಾಗಿ ನಿಂತರು. ಮೊದಲಿನಿಂದಲೂ ಆರ್ಯಸಮಾಜದಲ್ಲಿ ಆಸಕ್ತಿಯುಳ್ಳ ಇವರು ಪ್ರಗತಿಪರ ವಿಚಾರಕರು. ಜೊತೆಗೆ ಮಹಾತ್ಮಾಗಾಂಧಿಯವರ ಕರೆಗೆ ಓಗೊಟ್ಟು, ರಾಷ್ಟ್ರೀಯ ಸಂಗ್ರಾಮದಲ್ಲಿ ಧುಮುಕಿ, ಸೆರೆಮನೆಯ ವಾಸವನ್ನು ಅನುಭವಿಸಿದರು. 

	ಬಾಳಿನ ಹೋರಾಟದಲ್ಲಿ ಸಿಲುಕಿದ ಇವರಿಗೆ ಮೊದಲ ಪತ್ನಿ ಶ್ಯಾಮಾ ಅವರ ವಿಯೋಗ ಬರಿಸಲಾರದ ದುಃಖವಾಗಿ ಪರಿಣಮಿಸಿತು. ಅದರ ಫಲವೇ ನಿಶಾ ನಿಮಂತ್ರಣ ಕಾವ್ಯ. ಇದರಲ್ಲಿ ತಮ್ಮ ದೀರ್ಘಕಾಲದ ಕಾಯಿಲೆಗೆ ಗುರಿಯಾಗಿ ಸಾವನ್ನಪ್ಪಿದ ಕರುಣ ಕಥೆ ವರ್ಣಿತವಾಗಿದೆ. ಮರುಮದುವೆಯಾಗಿ ಇಬ್ಬರು ಪುತ್ರರನ್ನು ಪಡೆದರು. ಅನಂತರ ವಿಶೇಷ ಅಧ್ಯಯನ ನಡೆಸುವ ಅಭಿಲಾಷೆಯಿಂದ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ತೆರಳಿ ಕವಿ ಕೀಟ್ಸನ ಮೇಲೆ ತಮ್ಮ ಸಂಶೋಧನ ಪ್ರಬಂಧವನ್ನು ಸಿದ್ಧಪಡಿಸಿ ಪಿ.ಎಚ್‍ಡಿ. ಪದವಿ ಪಡೆದು ಹಿಂದಿರುಗಿ ಪ್ರಯಾಗ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮುಂದುವರೆದರು. ಕೆಲ ಸಮಯದ ತನಕ ಆಕಾಶವಾಣಿಯಲ್ಲಿ ಸಾಹಿತ್ಯದ ಕಾರ್ಯಕ್ರಮಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಅನಂತರ ಹಲವು ವರ್ಷಗಳ ಕಾಲ ದಿಲ್ಲಿಯ ವಿದೇಶೀ ಸಚಿವಾಲಯದಲ್ಲಿ ಹಿಂದಿಯ ವಿಶೇಷತಜ್ಞರಾಗಿ ಸೇವೆ ಸಲ್ಲಿಸಿದರು. ಇಂದಿನ ತಮ್ಮ ಸೇವಾನಿವೃತ್ತ ಜೀವನದಲ್ಲೂ ಇವರ ಸಾಹಿತ್ಯ ಸೇವೆ ಸಾಗಿಯೇ ಇದೆ. ಹಿಂದೀ ಚಲನಚಿತ್ರ ಪ್ರಪಂಚದಲ್ಲಿ ಖ್ಯಾತ ನಟನಾದ ಅಭಿತಾಬ್ ಬಚ್ಚನ್ ಇವರ ಮಗ.

	ಕವಿ ಬಚ್ಚನರು ಆಧುನಿಕ ಹಿಂದಿಯಲ್ಲಿ ಶ್ರೇಷ್ಠ ಭಾವಗೀತಕಾರರೆಂದು ಕೀರ್ತಿ ಪಡೆದವರು. ಆಧುನಿಕ ಹಿಂದೀ ಕಾವ್ಯಧಾರೆಯಲ್ಲಿ ಹಾಲಾವಾದದ ಪ್ರವರ್ತಕರಾಗಿ ಇವರು ತಮ್ಮ ರಚನೆಗಳನ್ನು ಆರಂಭಿಸಿದರು. ಹಾಲಾ ಎಂದರೆ ಮದಿರೆ, ನಶೆ, ವಿಸ್ಮøತಿ-ಇವು ಮದಿರೆಯ ವಿಶೇಷ ಗುಣಗಳು. ಕುಡುಕ ಮದಿರೆಯನ್ನು ಸೇವಿಸಿ ಕ್ಷಣಕಾಲ ತನ್ನ ಬಾಳಿನ ರೂಕ್ಷತೆ, ಕಷ್ಟ-ಕಾರ್ಪಣ್ಯಗಳನ್ನು ಮರೆತು ಒಂದು ಕಲ್ಪನಾಲೋಕದ ಸುಖದಲ್ಲಿ ಲೋಲಾಡುತ್ತಾನೆ. ಸಾಹಿತ್ಯದಲ್ಲಿ ಈ ಕ್ಷಣವಾದಿ ಸಿದ್ಧಾಂತಕ್ಕೆ ಹಾಲಾವಾದ ಎನ್ನುತ್ತಾರೆ. ಮದಿರಾಪಾನಕ್ಕೆ ಸಂಬಂಧಿಸಿದ ಸೆರೆಯಂಗಡಿ, ಸೆರೆಯ ಲೋಟ, ಹೂಜಿ, ಸೆರೆ ಮಾರುವವರ (ಹಿಂದಿಯಲ್ಲಿ ಮದಿರಾಲಯ, ಪ್ಯಾಲಾಸುರಾಹೀ, ಸಾಖೀ) ಇವನ್ನು ಪ್ರತೀಕಗಳಂತೆ ಬಳಸಿ ಇವುಗಳ ಮಾಧ್ಯಮದಿಂದ ಹೊಸತೊಂದು ಭಾವವನ್ನು ಇವರು ಅಭಿವ್ಯಕ್ತಪಡಿಸಿದ್ದಾರೆ. ನಶ್ವರ ಮತ್ತು ದುಃಖಮಯವಾದ ಈ ಬಾಳಿನಲ್ಲಿ ಸದ್ಯ ಲಭ್ಯವಾದ ಆನಂದದ ಕ್ಷಣಗಳನ್ನು ಉಪಭೋಗಿಸಬೇಕು ಎಂಬುದೇ ಈ ವಿಶೇಷ ವಿಚಾರಧಾರೆಯ ಸಂದೇಶ.

	ಬಚ್ಚನ್ ಉಮರ್ ಖಯಾಮನ ರಚನೆಗಳನ್ನು ಕಾವ್ಯರೂಪದಲ್ಲಿ ಹಿಂದಿಗೆ ಅನುವಾದಿಸಿದುದಲ್ಲದೆ ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಹಾಗೂ ವಿಶಿಷ್ಟ ಶೈಲಿಗಳಿಂದ ಮಧುಶಾಲಾ, ಮಧುಬಾಲಾ ಮತ್ತು ಮಧುಕಲಶ ಎಂಬ ಮೂರು ಸ್ವತಂತ್ರ ಕಾವ್ಯಗಳನ್ನು ರಚಿಸಿರುವರು.

	ಇವರ ಇತರ ಕೃತಿಗಳು: ಕಾವ್ಯನಾಟಕ: ತೇರಾಹಾಕ್ (1932), ನಿಶಾ-ನಿಮಂತ್ರಣ (1938), ಏಕಾಂತ ಸಂಗೀತ, ಅಕುಲಅಂತರ, ವಿಕಲ ವಿಶ್ವಸತರಂಗಿನಿ (1945), ಬಂಗಾಲ ಕಾ ಅಕಾಲ (1946), ಸೂತಕೀ ಮಾಲಾ (1948), ಹಲಾಹಲ ಮಿಲನ ಯಾಮಿನಿ (1950), ಪ್ರಣಯ ಪತ್ರಿಕಾ (1955), ಧಾರ್ ಕೆ ಇಧರ್-ಉಧರ್ (1957), ಬುದ್ಧ ಔರ್ ನಾಚ್ ಫರ್ (1958), ಆರತೀ ಔರ್ ಅಂಗಾರೇ (1958), ಜನಗೀತಾ (ಅನುವಾದ 1958), ಮ್ಯಾಕ್‍ಬೆತ್ (ಅನುವಾದ), ತ್ರಿಭಂಗಿಮಾ (1961), ಚಾರ್ ಖೇಮೇ ಔರ್ ಚೌಂಸರ್ ಖೂಂಟೇ (1962), ದೋ ಚಟ್ಟಾನೇ (1965), ಮರಕತ ದ್ವೀಪಕಾ ಸ್ವರ (1965), ನಾಗರಗೀತಾ (1966), ಬಹುತದಿನ ಬೀತೇ (1967), ಕಟಕೀ ಪ್ರತಿಮಾ ವೋಂಕೀ ಆವಾಜ್ (1968), ಉಭರತೇ ಪ್ರತಿಮಾನೋಂಕೇ ರೂಪ (1968), ಚಾಲಸಮೇಟಾ (1973), ಕಿಂಗ್‍ಲಿಯರ್ (ಅನುವಾದ 1973). ಗದ್ಯ: ಪ್ರವಾಸ ಕೀ ಡೈರೀ (1971), ಟೂಟೀ ಫೂಟೀ ಕಡಿಯಾಂ (1973), ಆತ್ಮಕಥೆ: ಕ್ಯಾ ಭೊಲೂಂ ಕ್ಯಾ ಯಾದ ಕರೂಂ (ಭಾಗ 1-1968) ನೀಡಕಾ ನಿರ್ಮಾಣ ಫರ್ ಫಿರ್ (ಭಾಗ 2-1970), ಬಸೇರೇ ಸೇ ದೂರ (ಭಾಗ 3-1977) ಹಾಗೂ ಕೆಲವು ಕಥೆಗಳು.

	ಮಧುಶಾಲಾ ಬಚ್ಚನರ ಅತಿ ಹೆಚ್ಚಿನ ಜನಪ್ರಿಯತೆಗೆ ಕಾರಣವಾದ ಶ್ರೇಷ್ಠ ಕಾವ್ಯ. ಇದರಲ್ಲಿ ಖಯಾಮನ ಸರಳ ಶೈಲಿಯಲ್ಲಿ ರಚಿಸಿದ 135 ಪದ್ಯಗಳಿದ್ದು, ಕಾವ್ಯದ ಅಂತರಾಳದಲ್ಲಿ ಜೀವನವನ್ನು ಬಾಳುವ ಮತ್ತು ಭೋಗಿಸುವ ಪ್ರಬಲ ಬಯಕೆ ಅಡಗಿದೆ.

	ಮಧುಬಾಲಾ ಮತ್ತು ಮಧುಕಲಶಗಳು ಹೆಚ್ಚು ಪ್ರೌಢ ಕೃತಿಗಳು. ಮಧುಶಾಲಾದಲ್ಲಿ ಬಂದಿರುವ ಭಾವಗಳು ಇಲ್ಲಿ ಇನ್ನೂ ವಿಸ್ತøತವಾಗಿ ಮೂಡಿಬಂದಿದೆ. ಇಲ್ಲಿಯೂ ಮಸ್ತಿ ಮತ್ತು ಯೌವನದ ಸೊಗಡಿದೆ.

	ಬಚ್ಚನ್ ಬರೆದ ಗದ್ಯ ಗ್ರಂಥಗಳಲ್ಲಿ ಆತ್ಮಕಥೆ ಮಹತ್ತ್ವದ್ದು. ಇದು ಕ್ರಮಶಃ ಮೂರು ಭಾಗಗಳಲ್ಲಿ ಪ್ರಕಟವಾಗಿದೆ. ತಮ್ಮ ಆರಂಭದ ಸಂಕಟಮಯ ಜೀವನ ಅನಂತರದ ವಿಕಾಸಪೂರ್ಣ ಜೀವನ ಮತ್ತು ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋಗಿಬಂದುದರ ವಿವರ-ಇವು ಈ ಮೂರು ಭಾಗಗಳ ವಸ್ತು. ಇವರ ಗದ್ಯ ಶೈಲಿ ರೋಚಕ ಹಾಗೂ ಸುಂದರ.
(ಆರ್.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ